ಪುಂಡಿ
ಮಾಲ್ವೇಸಿ ಕುಟುಂಬಕ್ಕೆ ಸೇರಿದ ಪ್ರಸಿದ್ಧ ನಾರು ಸಸ್ಯ.  ಪುಂಡ್ರಿಕೆ, ಡೆಕ್ಕನ್‍ಹೆಂಪ್, ಹೊಲದ ಪುಂಡ್ರಿಕೆ ಇವು ಇದರ ಇನ್ನಿತರ ಹೆಸರುಗಳು.  ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ರಷ್ಯಗಳಲ್ಲಿ ಇದಕ್ಕೆ ಕೆನಾಫ್ ಎಂಬ ಹೆಸರಿದೆ.  ಬೆಂಡೆ, ದಾಸವಾಳ, ಕಸ್ತೂರಿ ಬೆಂಡೆ ಇವುಗಳ ಹತ್ತಿರ ಸಂಬಂಧಿ ಇದು.  ಹೈಬಿಸ್ಕಸ್ ಕೆನಾಬಿನಸ್ ಇದರ ವೈಜ್ಞಾನಿಕ ಹೆಸರು.  

	ಪುಂಡಿಯ ತವರು ಆಫ್ರಿಕ ಎನ್ನಲಾಗಿದೆ.  ಆದರೆ, ಭಾರತದಲ್ಲೂ ಇದು ಕಾಡುಗಿಡದ ರೀತಿಯಲ್ಲಿ ಬೆಳೆಯುವುದರಿಂದ ಮೂಲತಃ ಭಾರತದ್ದೂ ಆಗಿರಬಹುದು ಎಂಬ ಅಭಿಪ್ರಾಯವೂ ಇದೆ.  ಇದರ ಮೂಲ ಯಾವುದೇ ಇರಲಿ ಭಾರತ, ಪಾಕಿಸ್ತಾನಗಳಲ್ಲಿ ಇದನ್ನು ಬಹು ಹಿಂದಿನಿಂದಲೂ ಬೇಸಾಯ ಮಾಡಲಾಗುತ್ತಿದ್ದು,  ಭಾರತದಲ್ಲಿ ಹಿಮಾಲಯದ ತಪ್ಪಲಿನ 1000 ಮೀ. ಎತ್ತರದ ಪ್ರದೇಶಗಳಿಂದ ಹಿಡಿದು ಮೈದಾನ ಸೀಮೆಗಳಲ್ಲೆಲ್ಲ ಇದನ್ನು ಕಾಣಬಹುದು.  ಆಗ್ನೇಯ ಏಷ್ಯ, ರಷ್ಯ, ಉತ್ತರ ಹಾಗೂ ದಕ್ಷಿಣ ಅಮೆರಿಕ, ಕ್ಯೂಬ, ಫಿಲಿಪೀನ್ಸ್‍ಗಳಲ್ಲೂ ಇದರ ಕೃóಷಿ ಉಂಟು.  ಎರಡನೆಯ ಮಹಾಯುದ್ಧದ ತರುವಾಯ ಸಣಬಿನ ಉತ್ಪಾದನೆ ಕಡಿಮೆಯಾಯಿತಾಗಿ ಪುಂಡಿಯ ಸಾಗುವಳಿಗೆ ಹೆಚ್ಚಿನ ಮಹತ್ವ ಲಭಿಸಿತು.  

	ಪುಂಡಿ ಸುಮಾರು 2.5-4 ಮೀ. ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ.  ಕಾಂಡತೆಳು, ನೇರವಾಗಿ ಬೆಳೆಯುತ್ತದೆ.  ಇದರ ಮೇಲೆ ಮುಳ್ಳುಗಳಿರಬಹುದು ಅಥವಾ ಇಲ್ಲ.  ಎಲೆಗಳು ಸರಳ, ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ಕಾಂಡದ ಕೆಳಭಾಗದಲ್ಲಿನ ಎಲೆಗಳು ಹೃದಯದಾಕಾರದಲ್ಲಿವೆಯಾದರೆ, ಮೇಲ್ಭಾಗವು ಹಸ್ತಾಕಾರದಲ್ಲಿ ಸೀಳಿವೆ.  ಎಲೆಗಳ ಅಂಚು ಗರಗಸದಂತಿದೆ.  ಹೂಗಳು ಒಂಟೊಂಟಿ ಎಲೆಗಳು ಕಕ್ಷದಲ್ಲಿ ಅರಳುವುವು.  ಪ್ರತಿ ಹೂವಿನಲ್ಲಿ 5-10 ಉಪಪುಷ್ಪಪತ್ರಗಳು, 5 ಪುಷ್ಪಪತ್ರಗಳು, 5 ದಳಗಳು ಹಲವು ಕೇಸರಗಳ ಕೇಸರದಂಡ, 5 ಕಾರ್ಪೆಲುಗಳಿಂದ ಕೂಡಿದ ಉಚ್ಛ ಸ್ಥಾನದ ಅಂಡಾಶಯ ಇವೆ.  ದಳಗಳ ಬಣ್ಣ ತಿಳಿ ಹಳದಿ.  ದಳಗಳ ಬುಡಭಾಗದ ಒಳಮೈ ಕೆಂಪುಬಣ್ಣದ್ದು.  ಫಲ ಸಂಪುಟ ಮಾದರಿಯದು, ಗುಂಡಗಿದೆ.

	ಕೃಷಿ : ಪುಂಡಿ ಪ್ರಧಾನತಃ ಉಷ್ಣ ಪ್ರದೇಶದ ಬೆಳೆ; 60-800ಜಿ ಉಷ್ಣತೆ ಇರುವಂಥ ಹಾಗೂ 4-5 ತಿಂಗಳ ಕಾಲ ಹರಡಿದಂತೆ ಸುಮಾರು 20-25 ಅಂಗುಲ ಮಳೆ ಆಗುವಂಥ ಅದ್ರ್ರಪೂರಿತ ಪ್ರದೇಶಗಳಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ.  ಇದಕ್ಕೆ ಕಡುಚಳಿಯನ್ನು ಎದುರಿಸುವ ಸಾಮಥ್ರ್ಯ ಇಲ್ಲವಾದ್ದರಿಂದ ಇದರ ಬೇಸಾಯ 450 ಉತ್ತರ ಅಕ್ಷಾಂಶದಿಂದ ಹಿಡಿದು 300 ದಕ್ಷಿಣ ಅಕ್ಷಾಂಶದವರೆಗಿನ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿದೆ.  ಪುಂಡಿಯ ಬೆಳವಣಿಗೆಯ ಮೇಲೆ ಪ್ರಕಾಶಾವಧಿಯೂ ಪ್ರಭಾವ ಬೀರುತ್ತದೆ; ಅಂದರೆ, ದಿನಗಳ ಪ್ರಕಾಶಾವಧಿ 121/2 ಗಂಟೆಗಳಿಗೂ ಹೆಚ್ಚಾಗಿದ್ದರೆ ಎಲೆ ಹಾಗೂ ಕಾಂಡಗಳ ಬೆಳವಣಿಗೆ ಹುಲುಸಾಗಿರುತ್ತದೆ; ಪ್ರಕಾಶಾವಧಿ ಹೃಸ್ವವಾದಂತೆ ಹೂಗಳ ಅರಳಿಕೆ ಆರಂಭವಾಗುತ್ತದೆ.  ಅಂತೆಯೇ ಭಾರತದಲ್ಲಿ ಇದು ಹೂ ಬಿಡುವ ಕಾಲ ಅಕ್ಟೋಬರ್, ನವಂಬರ್ ತಿಂಗಳುಗಳು.

	ಪುಂಡಿಯ ಬೇಸಾಯಕ್ಕೆ ನೀರು ಚೆನ್ನಾಗಿ ಬಸಿದು ಹೋಗುವಂಥ ಮರಳು ಮಿಶ್ರಿತ ಗೋಡು ಭೂಮಿ ಅತ್ಯತ್ತಮ.  ನೆಲದಲ್ಲಿ ಹ್ಯೂಮಸ್ ಹೆಚ್ಚಾಗಿರಬೇಕು.  ಉತ್ತರ-ಗುಜರಾತಿನ ಮೆಕ್ಕಲು ಭೂಮಿ, ದಕ್ಷಿಣದಲ್ಲಿನ ಕಪ್ಪು ಮಣ್ಣು, ಹಾಗೂ ಕೆಂಪು ಗೋಡು ಮತ್ತು ಲ್ಯಾಟರೈಟ್ ಭೂಮಿಗಳು ಇದರ ಬೇಸಾಯಕ್ಕೆ ತುಂಬ ಅನುಕೂಲವಾಗಿವೆ.  ಭಾರತದಲ್ಲಿ ಇದನ್ನು ಸಾಮಾನ್ಯವಾಗಿ ಜೋಳ, ರಾಗಿ, ಹತ್ತಿ, ಸಜ್ಜೆಗಳೊಂದಿಗೆ ಅಕ್ಕಡಿ ಬೆಳೆಯಾಗಿ ಕೃಷಿ ಮಾಡಲಾಗುತ್ತದೆ.

	ಪುಂಡಿಗೆ ಅನೇಕ ತೆರನ ಶಿಲೀಂಧ್ರ ರೋಗಗಳು ಬರುವುದುಂಟು.  ಇವುಗಳಲ್ಲಿ ಅತೀ - ಮುಖ್ಯವಾದುವು ಇಂತಿವೆ; ಮ್ಯಾಕ್ರೋಫೋಮಿನ ಫೇಸಿಯೋಲೈ ಎಂಬುದರಿಂದ ಉಂಟಾಗುವ ಬೇರುರೋಗ ಸರ್ಕೊಸ್ಪೊರ ಹೈಬಸಿಯೈಯಿಂದ ಬರುವ ಎಲೆ ಮಚ್ಚೆ ರೋಗ ಫಿಲ್ಲೊಸ್ಟಿಕ್ಟ ಹೈಬಸಿಯೈಯಿಂದ ಬರುವ ಎಲೆ ರೋಗ.  ಡಿಪ್ಲೋಡಿಯ ಹೈಬಸೀನದಿಂದ ಉಂಟಾಗುವ ಕಾಂಡ ಕೊಳೆತ ರೋಗ.  

	ಪುಂಡಿಯನ್ನು ಬಾಧಿಸುವ ಕೀಟಗಳಲ್ಲಿ ಮುಖ್ಯವಾದವು ಅಗ್ರಿಲಸ್ ಅಕ್ಯೂಟಸ್ ಎಂಬ ಗಾಲ್ ಕೀಟ ಹಾಗೂ ಪೋಡಾಗ್ರಿಕ ಎಂಬ ಇನ್ನೊಂದು ಕೀಟ.  

	ಇಳುವರಿ : ಪುಂಡಿಯನ್ನು ಬಿತ್ತಿದ 3-5 ತಿಂಗಳ ನಂತರ ಫಸಲು ಕುಯಿಲಿಗೆ ಸಿದ್ಧವಾಗುತ್ತದೆ.  ಇದನ್ನು ಮುಖ್ಯವಾಗಿ ನಾರಿಗಾಗಿ ಬೆಳೆಯುವುದರಿಂದ ಬೀಜಗಳು ಮೂಡುವ ಮೊದಲೇ ಕೇವಲ 10-15 ಹೂಗಳು ಮಾತ್ರ ಇರುವಾಗ ಗಿಡಗಳನ್ನು ಕತ್ತರಿಸಲಾಗುತ್ತದೆ.  ಬೀಜಗಳು ಬಲಿತ ತರುವಾಯ ಕಟಾವು ಮಾಡಿದರೆ ನಾರು ಒರಟಾಗುತ್ತದಲ್ಲದೆ ಅದರ ಹೊಳಪೂ ನಾಶವಾಗುತ್ತದೆ.  ಗಿಡಗಳನ್ನು ಬುಡಮಟ್ಟಕ್ಕೆ ಕತ್ತರಿಸಿ ಇಲ್ಲವೇ ಬೇರುಸಹಿತ ಕಿತ್ತು 30-40 ಗಿಡಗಳ ಕಂತೆಯ ರೂಪದಲ್ಲಿ ಕಟ್ಟಿ ಕೆಲವು ದಿನಗಳ ಕಾಲ ಒಣಗಿಸಲಾಗುತ್ತದೆ.  ಅನಂತರ 5-14 ದಿನಗಳ ಕಾಲ ನೀರಿನಲ್ಲಿ ನೆನೆಹಾಕಿ (ರೆಟಿಂಗ್).  ತರುವಾಯ ತೊಗಟೆಯನ್ನು ಬೇರ್ಪಡಿಸಿ ಲಘುವಾಗಿ ಬಡಿದು ನಾರನ್ನು ಬೇರ್ಪಡಿಸಲಾಗುತ್ತದೆ.  ಅನಂತರ ಇದನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.  ನೀರಿನಲ್ಲ ನೆನಸಿಯೊ ಅಥವಾ ನೆನಸದೆಯೋ ತೊಗಟೆಯನ್ನೂ ನಾರನ್ನು ಬೇರ್ಪಡಿಸಲು ಆಫ್ರಿಕ ಹಾಗೂ ಪಶ್ಚಿಮ ದೇಶಗಳಲ್ಲಿ ಯಾಂತ್ರಿಕ ವಿಧಾನಗಳನ್ನು ಬಳಸಲಾಗಿದೆ.  

	ಭಾರತದಲ್ಲಿ ಎಕರೆಗೆ 200-1000 ಪೌಂ.  ಒಣಗಿಸಿದ ಪುಂಡಿ ನಾರನ್ನು ಪಡೆಯುವುದಿದೆ.  ಕೆಲವು ದೇಶಗಳಲ್ಲಿ ಎಕರೆಗೆ 300 ಪೌಂ. ಇಳುವರಿ ಪಡೆಯಲಾಗಿದೆ.  ಬೀಜದ ಇಳುವರಿ ಎಕರೆಗೆ 700-800 ಪೌಂಡ್. 

	ಪುಂಡಿ ನಾರಿನ ಉತ್ಪಾದನೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ.  ಭಾರತದಲ್ಲಿ 8,50,00 ಎಕರೆ ಭೂಮಿಯಲ್ಲಿ ಇದರ ಬೇಸಾಯ ಇದ್ದು ವರ್ಷಕ್ಕೆ ಸುಮಾರು 633 ಮಿಲಿಯನ್ ಪೌಂಡ್ ನಾರನ್ನು ಪಡೆಯಲಾಗುತ್ತಿದೆ.

	ಬಳಕೆ : ಪುಂಡಿ ನಾರು ಹೆಚ್ಚು ಕಡಿಮೆ ಸೆಣಬಿನ ನಾರನ್ನು ಹೋಲುತ್ತದೆ.  ಎಳೆಗಳು ಸುಮಾರು 5-10 ಅಡಿ ಉದ್ದವಿರುವುವು.  ಸೆಣಬಿಗಿಂತ ಇದು ಕೊಂಚ ಒರಟು, ಆದರೆ, ಬೇಗ ಕೊಳೆಯುವುದಿಲ್ಲ.  ಇದನ್ನು ಹಗ್ಗ, ಹುರಿ, ಮೀನಿನ ಬಲೆ, ಚೀಲ, ಕ್ಯಾನ್‍ವಾಸ್ ಮುಂತಾದುವುಗಳ ತಯಾರಿಕೆಗೆ ಬಳಸಲಾಗುತ್ತದೆ.  ಪುಂಡಿಯ ಬೀಜಗಳಿಂದ ಎಣ್ಣೆಯನ್ನು ಪಡೆಯಬಹುದಾಗಿದ್ದು, ಇದನ್ನು ಸಾಬೂನು, ನೋಲಿಯಮ್, ಬಣ್ಣ, ವಾರ್ನಿಷ್‍ಗಳ ತಯಾರಿಕೆಗೂ ಮೃದುಚಾಲಕವಾಗಿಯೂ ಬಳಸುವುದಿದೆ.  ಅಲ್ಲದೆ, ಇದನ್ನು ಶುದ್ಧೀಕರಿಸಿ ಅಡುಗೆಗೂ ಉಪಯೋಗಿಸಬಹುದು.  ಎಣ್ಣೆಯನ್ನು ಹೊರತೆಗೆದ ಬಳಿಕ ಉಳಿಯುವ ಹಿಂಡಿಯನ್ನು ಗೊಬ್ಬರವನ್ನಾಗಿ ಬಳಸಬಹುದು.  ಪುಂಡಿಯ ಎಳೆಯ ಎಲೆಗಳನ್ನು ತರಕಾರಿಯಾಗಿ ಉಪಯೋಗಿಸುವುದು ಕೆಲವೆಡೆ ರೂಢಿಯಲ್ಲಿದೆ.  ಸೊಪ್ಪು ದನಗಳಿಗೆ ಒಳ್ಳೆಯ ಮೇವು.

	ಭಾರತದಲ್ಲಿ ಪುಂಡಿಯ ಬೇಸಾಯಕ್ಕೆ ಹೆಸರಾಂತ ರಾಜ್ಯಗಳೆಂದರೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಹಾಗೂ ಕರ್ನಾಟಕ.  ಆಂಧ್ರದ ಶ್ರೀಕಾಕುಳಂ, ವಿಶಾಖಪಟ್ನಂ. ಕೃಷ್ಣಾ ಹಾಗೂ ಗುಂಟೂರು ಜಿಲ್ಲೆಗಳಲ್ಲೂ ಮಹಾರಾಷ್ಟ್ರದ ಸೊಲ್ಲಾಪುರ, ಠಾಣಾ, ಖಾಂದೇಶಗಳಲ್ಲೂ ಕರ್ನಾಟಕದ ಬೆಳಗಾವಿ, ಬಿಜಾಪುರ, ಧಾರವಾಡ ಜಿಲ್ಲೆಗಳಲ್ಲೂ ಇದರ ಕೃಷಿ ಅಧಿಕ.
(ಬಿ.ಎ.ಸಿ.; ಕೆ.ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ